ದಶಕರ್ಮಗಳು-
ಇಲ್ಲಿ ಕರ್ಮ ಎಂದರೆ ಸಂಸ್ಕಾರ. ಹುಟ್ಟಿದ ಜೀವಿ ಸಾಯುವವರೆಗೂ ಪಡೆಯಬೇಕಾದ ಸಂಸ್ಕಾರಗಳು ಅಥವಾ ಜೀವಿಗೆ ನಡೆಸಬೇಕಾದ ಕರ್ಮಗಳು ಪ್ರಧಾನವಾಗಿ ಹತ್ತು ಎಂದು ಹಿಂದೂಧರ್ಮ ಹೇಳುತ್ತದೆ. ಆದರೆ ಸಂಸ್ಕಾರಗಳನ್ನು 3ರಿಂದ 53ರ ವರೆಗೂ ಹೆಸರಿಸುವುದುಂಟು. ಶಬ್ದ ಕಲ್ಪದ್ರುಮದ ಪ್ರಕಾರ ವೈದಿಕ ಧರ್ಮದಲ್ಲಿ ವಿವಾಹ, ಗರ್ಭಾಧಾನ, ಪುಂಸವನ, ಸೀಮಂತೋನ್ನಯನ, ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಚೂಡಾಕರಣ, ಉಪನಯನ, ಸಮಾವರ್ತನ-ಎಂಬ ದಶಕರ್ಮಗಳನ್ನು ಹೇಳಿದೆ. ಇಲ್ಲೂ ಈ ಕರ್ಮಗಳ ವಿಭಜನೆ ಗ್ರಂಥದಿಂದ ಗ್ರಂಥಕ್ಕೆ ವ್ಯತ್ಯಾಸವಾಗಿದೆ.

ವೀರಶೈವರ ಪ್ರಕಾರ ದಶಕರ್ಮಗಳು ಹೀಗಿವೆ : ಗರ್ಭಾಧಾನ, ಸೀಮಂತ, ಲಿಂಗಧಾರಣ, ನಾಮಕರಣ, ಕರ್ಣವೇಧ, ಚೌಲ, ವಿದ್ಯಾರಂಭ, ಶಿವದೀಕ್ಷಾ, ವಿವಾಹ, ಅಂತ್ಯೇಷ್ಟಿ. ಇವನ್ನು ವಚನಕಾರರು ಒಪ್ಪುವುದಿಲ್ಲವಾದರೂ ರೂಢಿಯಲ್ಲಿವು ಉಳಿದುಬಂದಿವೆ.
(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ